ಮಾನವ-ಆನೆ ಸಂಘರ್ಷಕ್ಕೆ ಸಹಾನುಭೂತಿ ಮತ್ತು ವಿಜ್ಞಾನ ಆಧಾರಿತ ಪರಿಹಾರ ಇತ್ತೀಚೆಗೆ ಬೆಳೂರು ಪ್ರದೇಶದ ಕಾಡಾನೆಗಳನ್ನು ಚಿಕ್ಕಮಗಳೂರು ಭಾಗದ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸುವ ವಿಷಯ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಸ್ಥಳಾಂತರವೇ ಪರಿಹಾರ ಎನ್ನುತ್ತಾರೆ. ಕೆಲವರು ಅದರ ವಿರುದ್ಧ ಧ್ವನಿ ಎತ್ತುತ್ತಾರೆ. ಆದರೆ ಈ ಚರ್ಚೆಯ ಮಧ್ಯೆ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. ಆನೆಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಓಡಿಸುವ ಮುನ್ನ, ಅವುಗಳು ಯಾಕೆ ತಮ್ಮ ಮೂಲ ವಾಸಸ್ಥಾನವನ್ನು ಬಿಟ್ಟು ಹೊರಬರುತ್ತಿವೆ ಎಂಬುದನ್ನು ನಾವು ಗಂಭೀರವಾಗಿ ಪರಿಶೀಲಿಸಿದ್ದೇವೆಯೇ? ಮಾನವನಿಗೆ ಮನೆ ಹೇಗೆ ಮುಖ್ಯವೋ, ಆನೆಗಳಿಗೂ ಕಾಡು ಅಷ್ಟೇ ಮುಖ್ಯ. ಆನೆಗಳು ಗ್ರಾಮಗಳತ್ತ ಏಕೆ ಬರುತ್ತಿವೆ? ಸಾಮಾನ್ಯವಾಗಿ ಒಂದು ಕಾಡಾನೆಗೆ ಮೂರು ಮೂಲಭೂತ ಅಗತ್ಯಗಳಿವೆ: ವಿಶಾಲವಾದ ಅರಣ್ಯ ಪ್ರದೇಶ ಆಹಾರ ನೀರು ಆದರೆ ಇದಕ್ಕಿಂತಲೂ ಮುಖ್ಯವಾದುದು: ಸುರಕ್ಷಿತ ಸಂಚಾರ ಮಾರ್ಗಗಳು. ಆನೆಗಳು ತಲೆಮಾರುಗಳಿಂದ ಬಳಸುತ್ತಿರುವ ಅರಣ್ಯ ಮಾರ್ಗಗಳ ಮೂಲಕವೇ ಸಂಚರಿಸುತ್ತವೆ. ಇಂದು ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿವೆ. ರಸ್ತೆ, ತೋಟ, ಕೃಷಿ ಜಮೀನು, ವಸತಿ ಪ್ರದೇಶಗಳು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳು ಆನೆಗಳ ಸಹಜ ಸಂಚಾರ ದಾರಿಗಳನ್ನು ಅಡ್ಡಿಪಡಿಸುತ್ತಿವೆ. ಪರಿಣಾಮವಾಗಿ ಅವು ಮಾನವ ವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತಿವೆ. ಆನೆಗಳು ತಮ್ಮ ಹಸಿವು ಮತ್ತು ಬದುಕಿ...